ನಾನರಿತ ವಿಶ್ವಮಾನವ : ಬಸವಣ್ಣ

 ನಾನರಿತ ವಿಶ್ವಮಾನವ : ಬಸವಣ್ಣ

ಬಸವಣ್ಣನವರು ಈ ಜಗತ್ತು ಕಂಡ ಮಹಾ ಮಾನವತಾವಾದಿ, ದಾರ್ಶನಿಕ, ಭಕ್ತಿ ಬಂಢಾರಿ, ಆದರ್ಶ ಆಡಳಿತಗಾರ, ಸಮಾಜ ಸುಧಾರಕರು, ಸಾಮಾಜಿಕ ನ್ಯಾಯದ ಕ್ರಾಂತಿಕಾರಿ ಮತ್ತು ವಚನಕಾರರಾಗಿದ್ದಾರೆ. ೧೨ನೇ ಶತಮಾನದಲ್ಲಿ ಬಸವಣ್ಣನವರು ಮಾಡಿದ ಸಮಾಜ ಸುಧಾರಣಾ ಕಾರ್ಯಗಳು ಮತ್ತು ಅವರ ಕ್ರಾಂತಿಕಾರಿ ವಿಚಾರಗಳು ೨೧ ನೇ ಶತಮಾನದಲ್ಲಿ ಬಹಳ ಪ್ರಸ್ತುತ ಎನಿಸುತ್ತವೆ. 

ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಡಿಪಾಯವನ್ನು ಬಸವಣ್ಣನವರು ೧೨ನೇ ಶತಮಾನದಲ್ಲಿ 'ಅನುಭವ ಮಂಟಪ'ದ ಮೂಲಕವಾಗಿ ಯಾವುದೇ ಜಾತಿ, ಮತ, ಧರ್ಮ, ಮೇಲು ಕೀಳು ಎಂಬ ಭೇದ ಭಾವವಿಲ್ಲದೆ ಎಲ್ಲರೂ ಸೇರುತ್ತಿದ್ದರು. ಅಲ್ಲಿ ಶಿವ ಶರಣರು ಉತ್ತಮ ಸಮಾಜ ನಿರ್ಮಾಣ ಮಾಡುವ ಚರ್ಚೆಗಳನ್ನು ಮಾಡಿ, ಸಮಾಜಕ್ಕೆ ಮೌಲ್ಯಯುತವಾದ ಸಂದೇಶಗಳನ್ನು ನೀಡುತ್ತಿದ್ದರು. ಆ ಮೂಲಕವಾಗಿ ಸೌಹಾರ್ದಯುತ ಸಮಾಜ ನಿರ್ಮಾಣದಲ್ಲಿ ಬಸವಣ್ಣನವರು ಪ್ರಮುಖ ಪಾತ್ರವಹಿಸಿದರು. 

ಬಸವಣ್ಣನವರು ತಮ್ಮ ಕಾಲಘಟ್ಟದಲ್ಲಿ ಕಂಡುಕೊಂಡ ತಪ್ಪು ತಡೆಗಳು, ಅಂಕು ಡೊಂಕುಗಳು ಮತ್ತು ಅಂಧಕಾರವನ್ನು ಹೋಗಲಾಡಿಸಲು ತಮ್ಮದೇ ಆದ ಹೊಸ ಶೈಲಿಯ ಜನಸಾಮಾನ್ಯರಿಗೆ ಅರ್ಥವಾಗುವಂತಹ ವಚನಗಳನ್ನು ರಚಿಸಿದರು. ಅವು ಸಾಮನ್ಯ ಜನರಿಗೂ ತಿಳಿಯವಂತಿದ್ದವು. ಹಾಗಾಗಿ, ಅವರು ವಚನ ಸಾಹಿತ್ಯದ ಮೂಲಕವಾಗಿ ಜನರ ಹೃದಯವನ್ನು ತಲುಪಿದರು.

ಅನುಭವ ಮಂಟಪದಲ್ಲಿ ಬಸವಣ್ಣನವರು ಯಾವುದೇ ಲಿಂಗ ಭೇದವಿಲ್ಲದೆ ಶರಣ ಶರಣೆಯರಿಗೆ ತಮ್ಮ ಅನುಭವಗಳು ಮತ್ತು ವಿಚಾರಗಳನ್ನು ಹಂಚಿಕೊಳ್ಳಲು ಅವಕಾಶ ಮಾಡಿಕೊಟ್ಟರು. ಅಂದಿನ ಮಡಿವಂತಿಕೆಯ ಸಮಾಜದಲ್ಲಿ ಸ್ತ್ರೀಯರಿಗೆ ಉತ್ತಮ ಸ್ಥಾನವನ್ನು ನೀಡಿದ್ದರು ಎಂಬುದನ್ನು ನಾವು ಸ್ಮರಿಸಬಹುದು. ಇವತ್ತಿಗೂ ರಾಜಕೀಯದಲ್ಲಿ ಮಹಿಳೆಯರು ಕಡಿಮೆ ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದಾರೆ‌. ಏಕೆಂದರೆ, ಪುರುಷ ಪ್ರಧಾನ ಸಮಾಜದಲ್ಲಿಯ ಕಟ್ಟುಪಾಡುಗಳು ಮತ್ತು ನೀಯಮಗಳನ್ನು ದಾಟಿ ಸಮಾಜದ ಬದಲಾವಣೆಗಳಲ್ಲಿ ಕೈ ಜೋಡಿಸಬೇಕಾಗಿದೆ‌. ನಾವು ಮಕ್ಕಳಲ್ಲಿ ಚಿಕ್ಕಂದಿನಿಂದಲೇ ಹೆಣ್ಣು ಮತ್ತು ಗಂಡು ಎಂಬ ಭೇದಭಾವ ಮಾಡದೇ ಇದ್ದರೇ, ಅವರು ಸುಸಂಸ್ಕೃತ ಸಮಾಜ ನಿರ್ಮಾಣದಲ್ಲಿ ತೊಡಗಿಕೊಳ್ಳುತ್ತಾರೆ‌. ಅಣ್ಣನವರು ಸುಸಂಸ್ಕೃತ ಸಮಾಜದಲ್ಲಿ ಗಂಡು ಮತ್ತು ಹೆಣ್ಣು ಇಬ್ಬರೂ ಪ್ರಮುಖರು ಎಂದು ತಮ್ಮ ವಚನಗಳಲ್ಲಿ ತೋರಿಸಿಕೊಟ್ಟಿದ್ದಾರೆ.

ಬಸವಣ್ಣನವರು ಅಂದಿನ ಸಮಾಜದಲ್ಲಿನ ಜಾತಿ ವ್ಯವಸ್ಥೆಯನ್ನು ಧಿಕ್ಕರಿಸಿ, ಎಲ್ಲ ಸಮುದಾಯದ ಜನರನ್ನು ಒಳಗೊಳ್ಳುವ ಮಾನವೀಯ ನೆಲೆಗಟ್ಟಿನ ನೆಲೆಯಲ್ಲಿ 'ಲಿಂಗಾಯತ' ಪರಂಪರೆಯನ್ನು ಹುಟ್ಟು ಹಾಕಿದರು. ಆ ಪರಂಪರೆಯ ಶರಣ - ಶರಣೆಯರಿಗೆ ಲಿಂಗ(ಇಷ್ಟಲಿಂಗ) ಧಾರಣೆ ಮಾಡುವುದರ ಮೂಲಕವಾಗಿ ಯಾವುದೇ ಜಾತಿ ಮತ್ತು ಮತದ ವ್ಯಕ್ತಿಗಳು ಈ ಪರಂಪರೆಯನ್ನು ಸೇರಬಹುದಾಗಿತ್ತು. ಲಿಂಗ ಪೂಜೆಯ ಮುಖಾಂತರವಾಗಿ ಸಮಾಜದಲ್ಲಿ ಆಧ್ಯಾತ್ಮಿಕ ನೆಲೆಗಟ್ಟನ್ನು ಸ್ಥಾಪಿಸುವಲ್ಲಿ ಯಶಸ್ವಿಯಾದರು. ೧೨ನೇ ಶತಮಾನದಲ್ಲಿ ತಮ್ಮ ಸಮಾಜ ಸುಧಾರಿಸುವ ನಿಟ್ಟಿನಲ್ಲಿ ತಮ್ಮ 'ವಚನಗಳ' ಮೂಲಕ ಸಂದೇಶಗಳನ್ನು ರವಾನಿಸಿದರು. ಆ ಸಂದರ್ಭದಲ್ಲಿ ರಚನೆ ಮಾಡಿರುವ ವಚನಗಳು ಇವತ್ತು ಮತ್ತು ಮುಂದೆಯೂ ಸಮಾಜದಲ್ಲಿ ಆಧ್ಯಾತ್ಮಿಕ ಪರಂಪರೆಯನ್ನು ಮುನ್ನಡಿಸಿಕೊಂಡು ಹೋಗಬಲ್ಲವು. ಬಸವಣ್ಣನವರು ರಚಿಸಿರುವ ವಚನಗಳು ಹಲವಾರು ಭಾಷೆಯಗಳಲ್ಲಿ ಭಾಷಾಂತರವಾಗಿವೆ. ಅದರ ಮೂಲಕವಾಗಿ ಬಸವಣ್ಣನವರು ವಿಶ್ವಕ್ಕೆ ಪರಿಚಿತವಾಗಿದ್ದಾರೆ‌.

೧೨ನೇ ಶತಮಾನದಲ್ಲಿ ಬಸವಣ್ಣನವರನ್ನು ಅಂದಿನ ಸಮಾಜ ಸ್ವೀಕರಿಸಲು ಪ್ರಮುಖ ಕಾರಣವೆಂದರೆ ಅವರು ನುಡಿದಂತೆ ನಡೆದ ಮಹಾನುಭಾವ. ಆ ಕಾರಣಕ್ಕಾಗಿ ಇವತ್ತಿಗೂ ಅವರ ಆಚಾರ, ವಿಚಾರ, ನಡೆ ಮತ್ತು ನುಡಿಗಳು ಪ್ರಸ್ತುತವಾಗಿವೆ. ಆದರೆ, ಇವತ್ತಿನ ಸಮಾಜಕ್ಕೆ ಬಸವಣ್ಣನವರು ಬೇಕು; ಅವರ ಆಚಾರ , ವಿಚಾರಗಳು ಅಷ್ಟು ಹೇಳಿಕೊಳ್ಳುವಷ್ಟು ಅಳವಡಿಸಿಕೊಳ್ಳುತ್ತಿಲ್ಲ. ಅವರ ಮೂರ್ತಿಗಳು ಹೆಚ್ಚಾಗುತ್ತಿವೆ, ಆದರೆ ಅವರ ತತ್ವ ಆದರ್ಶಗಳಲ್ಲ. ನಾವೆಲ್ಲರೂ ಮುಂದಿನ ಪೀಳಿಗೆಗೆ ಬಸವಣ್ಣನವರ ಆಧ್ಯಾತ್ಮಿಕ, ಶೈಕ್ಷಣಿಕ, ಸಾಮಾಜಿಕ ವಿಚಾರಗಳನ್ನು ಅಳವಡಿಸಿಕೊಂಡು, ಅಳವಡಿಸಲು ನಾವು ಪ್ರಯತ್ನ ಮಾಡೋಣ.

- ನಿಂಗಪ್ಪ ಮಾಳಶೆಟ್ಟಿ,                                                       ಸಹ ಶಿಕ್ಷಕರು,                                                             ಸ.ಹಿ.ಪ್ರಾ. ಶಾಲೆ, ವ್ಯಾಸನಕೆರೆ,                                 ಹೊಸಪೇಟೆ, ವಿಜಯನಗರ -೫೮೩೨೨೨

Comments

Post a Comment

Popular posts from this blog

ನೈತಿಕ ಮೌಲ್ಯ ಆಚರಣೆಯಲ್ಲಿರಲಿ.

ಅಜ್ಜನ ನೆನಪು : ಭಾಗ -೧ ಅಜ್ಜನ ನಂಟು ಹರಿಯಲಾರದ ಗಂಟು